ಕಾಂಗ್ರೆಸ್ ಹೈಕಮಾಂಡ್ ಅಧಿಕಾರದ ಸೂತ್ರದ ವಿಚಾರವನ್ನು ಗುಪ್ತವಾಗಿ ಇರಿಸಿದೆ. ಯಾರಿಗೂ ಊಹಿಸಲು ಸಾಧ್ಯವಿಲ್ಲ. ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳಿಗೆ ಮಾತ್ರ ಗೊತ್ತಿರಬಹುದೇನು ಆದರೆ ಯಾವುದೇ ಸರ್ಕಾರವಾಗಲಿ ಐದು ವರ್ಷ ಅಂದರೆ 60 ತಿಂಗಳು ಅಧಿಕಾರ ನಡೆಸಲು ಕಾಲಾವಕಾಶ ಇರುತ್ತದೆ. ಈಗಾಗಲೇ ಸರ್ಕಾರ ರಚನೆಯಾಗಿ ಹೆಚ್ಚು-ಕಡಿಮೆ 17 ತಿಂಗಳಾಗಿದೆ. ಸರ್ಕಾರ ವಿವಿಧ ಕಾರ್ಯಕ್ರಮ, ಗ್ಯಾರಂಟಿ ಯೋಜನೆಗಳಿಂದ ಜನಮೆಚ್ಚುಗೆ ಪಾತ್ರರಾದರೂ ಪ್ರಸ್ತುತ ಸಚಿವರನ್ನು ಜಿಲ್ಲಾ ಕೇಂದ್ರದಲ್ಲಿ ಸಾರ್ವಜನಿಕರು ಹಳೆ ಮುಖ ಮತ್ತೆ ಮತ್ತೆ ನೋಡಲು ಬಯಸುವುದಿಲ್ಲ.
ಪ್ರಸ್ತುತ ಸಚಿವರನ್ನು ಬೇರೆ-ಬೇರೆ ಜಿಲ್ಲೆಗೆ ಅಥವಾ ಅಂತರಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ನೇಮಿಸಬೇಕು ಮತ್ತು 20 ತಿಂಗಳು ಬಿಟ್ಟು ಬೇರೆಯವರಿಗೂ ಅವಕಾಶ ನೀಡುವುದು ಅವಶ್ಯಕವಾಗಿರುತ್ತದೆ. ಮಂತ್ರಿಗಳು ಎಂದಮೇಲೆ ಕೇವಲ ಅಯಾ ಇಲಾಖೆಯ, ಅಯಾ ಜಿಲ್ಲೆಯ ಸಚಿವರಾಗಿ ಇರುವುದಿಲ್ಲ. ಇಡೀ ಕರ್ನಾಟಕ ರಾಜ್ಯಕ್ಕೆ ಮಂತ್ರಿಯಾಗಿರುತ್ತಾರೆ. ಈಗಿರುವ 4-5 ಬಾರಿ ಆಯ್ಕೆಯಾಗಿರುವ ಶಾಸಕರಲ್ಲಿ 50-60 ಶಾಸಕರು ಇರುವುದರಿಂದ ಅವರಿಗೂ ಅವಕಾಶ ನೀಡುವ ಮೂಲಕ ಆಡಳಿತ ಯಂತ್ರ ಚುರುಕುಗೊಳಿಸುವುದು ಅಗತ್ಯವಿರುತ್ತದೆ. ಈಗಿರುವ ಅಧಿಕಾರಿಗಳು ಯಾರು ಯಾರ ಮಾತನ್ನು ಕೇಳುತ್ತಿಲ್ಲ. ಜನ ಸಾರ್ವಜನಿಕರು ಕೇಳುತ್ತಿರುವುದು ಕಾಯ್ದೆ ಕಾನೂನಿನ ಪ್ರಕಾರ,
ನಿಯಮಾನುಸಾರ ಸಿಗಬೇಕಾದ ಸೌಲಭ್ಯ ಯೋಜನೆಗಳನ್ನು ಆದರೆ ಅಧಿಕಾರಿಗಳು ಅವುಗಳನೆಲ್ಲ ಓದಗಿಸಲು ನೂರಾರು ಬಾರಿ ವಿಚಾರ ಮಾಡಿ, ಕ್ರಮ ಕೈಗೊಳ್ಳಬೇಕಾ ಅಥವಾ ಬೇಡವೇ ಎಂಬ ಮನಸ್ಥಿತಿಯಲ್ಲಿ ಇದ್ದಾರೆ. ಶಾಸಕರು ತಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿ ಆಲಿಸಿದ ಜನಸ್ಪಂದನ ಕಾರ್ಯಕ್ರಮದ ಸಾರ್ವಜನಿಕರ ಕುಂದುಕೊರತೆಯ ಅರ್ಜಿಗಳು ಹಾಗೂ ದಿನನಿತ್ಯ ವಿಧಾನಸೌಧ ಸಚಿವಾಲಯಕ್ಕೆ ಬರುತ್ತಿರುವ ಪತ್ರದ ಅರ್ಜಿಗಳು ಮತ್ತು ಜನಸ್ಪಂದನ ಐ.ಪಿ.ಜಿ.ಆರ್.ಎಸ್ ಅನ್‌ಲೈನ್‌ನಲ್ಲಿ ದಾಖಲಾದ ಸಾರ್ವಜನಿಕರ ಅರ್ಜಿಗಳನ್ನು ಎಷ್ಟರ ಮಟ್ಟಿಗೆ ಬಗೆಹರಿಸಲಾಗಿದೆ ಎಂಬುವುದೇ ಯಕ್ಷ ಪ್ರಶ್ನೆಯಾಗಿದೆ. ಶಾಸಕರು ಜನರ ಕಷ್ಟ ದೂರ ಮಾಡಲು ಪಣ ತೊಡುತ್ತಿದ್ದಾರೆ ಆದರೆ ಅಧಿಕಾರಿಗಳಿಂದ ಬರುವ ಉತ್ತರ ತಪ್ಪು ಮಾಹಿತಿ ಮತ್ತು ವಿಳಂಬ ನೀತಿ.
ಕೇಂದ್ರ ಸರ್ಕಾರದ ಅಧೀನದಲ್ಲಿರುವ ಕಚೇರಿಯ ಅಧಿಕಾರಿಗಳಿಗೆ ಹೇಳುವರು ಇಲ್ಲ ಕೇಳುವರು ಇಲ್ಲ. ಹೀಗಾಗಿ ಆಡಳಿತ ಯಂತ್ರ ಚುರುಕುಗೊಳಿಸಲು ಪ್ರತಿ 20 ತಿಂಗಳಗೊಮ್ಮೆ 34 ಸಚಿವರಲ್ಲಿ ಕೇವಲ 20 ಸಚಿವರನ್ನು ಬದಲಾಯಿಸಿದರೆ, ಆಡಳಿತ ಯಂತ್ರ ಚುರುಕುಗೊಳಿಸಲು ಸಾಧ್ಯವಾಗುತ್ತದೆ. ಸಾರ್ವಜನಿಕರ ಸಮಸ್ಯೆಗಳೆಲ್ಲ ಪರಿಹಾರವಾಗಲೂ ಅಧಿಕಾರಿಗಳು ಜವಾಬ್ದಾರಿಯಿಂದ ಕೆಲಸ ನಿರ್ವಹಿಸಬೇಕು ಅದಕ್ಕೆ ಪ್ರತಿ 20 ತಿಂಗಳಗೊಮ್ಮೆ ಮೂರು ಸಲ ಸಚಿವ ಸಂಪುಟ ಪುನರ್ ರಚಿಸಬೇಕಿದೆ.
ವೀರೇಶ ಧೂಪದಮಠ
