ಹಲವು ಬಜೆಟ್ ಮಂಡಿಸಿದರು ಜನರಿಗೆ ತಪ್ಪದ ಸಂಕಟ

ಕೇಂದ್ರ ಸರ್ಕಾರ ಪ್ರತಿ ಬಾರಿಯು ಬಜೆಟ್ ಮಂಡಿಸಿದಾಗ ಬಡವರಿಗೆ, ಮಧ್ಯಮ ವರ್ಗದವರಿಗೆ ಅಶ್ರಯವಾಗುವಂತಹ ಏನಾದರೂ ಹೊಸ ಯೋಜನೆ ಜಾರಿಗೆ ತರಬಹುದು ಎಂಬ ನಿರೀಕ್ಷೆ ಇತ್ತು. ಆ ಎಲ್ಲ ನಿರೀಕ್ಷೆ ಹುಸಿಯಾಗಿದೆ. ಒಂದು ಏನಂದರೆ 12 ಲಕ್ಷ ರೂ.ವರೆಗೆ ಮಧ್ಯಮ ವರ್ಗದವರಿಗೆ ತೆರಿಗೆ ಇಲ್ಲ ಎಂದು ಘೋಷಿಸಿದ್ದಾರೆ. ಆದರೆ ಅಷ್ಟು ಹಣ ಬಡವರು, ಮಧ್ಯಮ ವರ್ಗದ ಜನರ ಬಳಿ ಇದ್ರೇ ತಾನೇ ಖುಷಿಪಡಲು ಸಾದ್ಯ. ಬಡವರ, ಮಧ್ಯಮ ವರ್ಗದ ಜನರ ಬಳಿ ಬರೀ ಸಾಲವಿದೆ. ಬಡವರು, ಮಧ್ಯಮ ವರ್ಗದ ಜನ ಉದ್ಯೋಗವಿಲ್ಲದೇ ಸಾಲಶೂಲ ಮಾಡಿ ತರಕಾರಿ, ದಿನಸಿ, ಅಗತ್ಯ ವಸ್ತು ಖರೀದಿಸುವುದಲ್ಲದೇ, ನೀರಿನ ಬಿಲ್, ಕರೆಂಟ್ ಬಿಲ್, ಮೊಬೈಲ್, ಟಿವಿ ರೀಚಾರ್ಜ್ ಸೇರಿದಂತೆ ಕೇಂದ್ರ ಸರ್ಕಾರಕ್ಕೆ ಸಾಲದ ಹಣದಲ್ಲಿ ತೆರಿಗೆ ಪಾವತಿ ಮಾಡುತ್ತಿದ್ದಾರೆ.
ಬರೀ ಸಾಲಶೂಲ ಮಾಡಿಯೇ ಜೀವನ ಸಾಗಿಸುವಂತಹ ವ್ಯವಸ್ಥೆ ಇದೆ. ಸಾಲ ಮಾಡಿದ್ದರಿಂದ ಬಡ್ಡಿ ಪಾವತಿ ಮಾಡಲು ಸಾಧ್ಯವಾಗುತ್ತಿಲ್ಲ. ವಿಪರೀತ ಸಂಕಷ್ಟಕ್ಕೆ ಬಡವರು, ಮಧ್ಯಮ ವರ್ಗದ ಜನ ಸಿಲುಕಿಕೊಂಡಿದ್ದಾರೆ. ಈ ವ್ಯವಸ್ಥೆ ಹೀಗೆ ಮುಂದುವರಿದರೇ ಬಡವರು, ಮಧ್ಯಮ ವರ್ಗದವರು ಸರ್ಕಾರದ ವಿರುದ್ಧ ರೊಚ್ಚಿಗೆದ್ದು ದಂಗೆ ಏಳುವ ದಿನ ದೂರವಿಲ್ಲ. ಅದಕ್ಕಾಗಿ ಸರ್ಕಾರಗಳು ಬಡವರು, ಮಧ್ಯಮ ವರ್ಗದ ಜನರಿಗೆ ಉದ್ಯೋಗ ಸೃಷ್ಟಿಸುವುದಲ್ಲದೇ, ಕಾಲಕ್ಕೆ ತಕ್ಕಂತೆ ಸಂಬಳ ಏರಿಕೆ ಮಾಡಬೇಕು. ಈಗಿನ ದಿನಮಾನಗಳಲ್ಲಿ 50 ರೂ. 100 ರೂ.ಗಳಿಗೆ ಏನು ಬರುತ್ತಿಲ್ಲ. ಹಣದ ಮೌಲ್ಯ, ಕಿಮ್ಮತು ಕುಸಿದು ಬಿದ್ದು ಹೋಗಿದೆ. ಬಡವರು, ಮಧ್ಯಮ ವರ್ಗದ ಜನ ಸಾಲ ಮಾಡಿಯೇ ಜೀವನ ಸಾಗಿಸಬೇಕಿದೆ.
ದಿನದಿಂದ ದಿನಕ್ಕೆ ಸಾಲಗಾರ ಕಾಟ ತಾಳಲಾರದೆ ಆತ್ಮಹತ್ಯೆ, ಊರು ಬಿಟ್ಟು ಹೋಗುವಂತಾಗಿದೆ. ಬಡವರು, ಮಧ್ಯಮ ವರ್ಗದ ಜನರಿಗೆ ಉದ್ಯೋಗ ದೊರಕಿಸಿ ಕೊಡುವುದು, ತರಕಾರಿ, ದಿನಸಿ, ಅಗತ್ಯ ವಸ್ತುಗಳ ಬೆಲೆ ಏರಿಕೆಯನ್ನು ತಡೆಯುವುದು, ಗ್ಯಾರಂಟಿ ಯೋಜನೆಯಂತಹ ಕಲ್ಯಾಣ ಕಾರ್ಯಕ್ರಮ ಮಾಡುವುದು ಸೇರಿದಂತೆ ಬಡವರು, ಮಧ್ಯಮ ವರ್ಗದ ಜನ ಸಂತೃಪ್ತಿಯಿಂದ ಜೀವನ ಸಾಗಿಸುವಂತಹ ವ್ಯವಸ್ಥೆ ಕೇಂದ್ರ ಸರ್ಕಾರ ಮಾಡುವಂತಹ ದಿಟ್ಟ ಹೆಜ್ಜೆ ಇಡಬೇಕು.
ವೀರೇಶ ಧೂಪದಮಠ