
Note: This image was AI-generated
ಬೆಂಗಳೂರಿನ ಬಿಡದಿ ಟೌನ್‌ಶಿಪ್ ಗೊಂದಲಕ್ಕೆ ರೈತರ ಸಮಮತವೇ ಪರಿಹಾರ
ಬಿಡದಿ ಟೌನ್‌ಶಿಪ್ ಅನ್ನುವುದು ಬೆಂಗಳೂರಿನ ಭಾರವನ್ನು ಕಡಿಮೆ ಮಾಡಲು ಜನರನ್ನು ಸ್ಥಳಾಂತರಿಸುವ ಕಾರ್ಯ ಅಥವಾ ವಾಸಿಸಲು ಯೋಗ್ಯವಾದ ಸ್ಥಳ ಎಂತಲೂ ಕರೆಯಬಹುದು. ಗ್ರೇಟರ್ ಬೆಂಗಳೂರು ಸಹಯೋಗದಲ್ಲಿ 9,242 ಎಕರೆ ಹೆಚ್ಚು ಕೃಷಿ ಭೂಮಿಯಲ್ಲಿ ಕೈಗಾರಿಕೆ, ವಾಣಿಜ್ಯ, ವಸತಿ ಸಮುಚ್ಚಯ ಒಳಗೊಂಡ ಸಮಗ್ರ ಯೋಜನೆ ರೂಪಿಸುವುದಾಗಿದೆ. ಮೂಲಗಳ ಪ್ರಕಾರ ಪ್ರತಿ ಎಕರೆಗೆ ಗರಿಷ್ಠ 2.50 ಕೋಟಿ ರೂಪಾಯಿ ಭೂ ಪರಿಹಾರ ನಿಗದಿಪಡಿಸಲಾಗಿದೆ. ಆದರೆ ಕೆಲ ರೈತರು ಭೂಮಿ ನೀಡಲು ಸಹಮತವಿಲ್ಲ. ಇಲ್ಲಿ ಏನೆಂದರೆ ಎಷ್ಟು ರೈತರು ಭೂಮಿ ಕೊಡುತ್ತಾರೆ ಅಥವಾ ಕೊಡಲ್ಲ ಎಂಬುದರ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ. ಹಾಗಾಗಿ ಸ್ಪಷ್ಟ ಚಿತ್ರಣ ಬೇಕಾಗಿದ್ದು, ಪಹಣಿಯಲ್ಲಿರುವ ಭೂಮಿ ಮಾಲೀಕರ ಒಂದು ಚುನಾವಣೆ ಮುಖಾಂತರ ಟೌನ್‌ಶಿಪ್ ಬೇಕಾ ಅಥವಾ ಬೇಡ್ವಾ ಎಂಬ ಅಂಶ ತಿಳಿಯಬೇಕು.
ಇಲ್ಲವೇ ಜಮೀನು ಕೊಡುವವರು ಅಥವಾ ಕೊಡದಿರಲು ತೀರ್ಮಾನಿಸಿರುವ ರೈತರ ಸಹಿ ಸಂಗ್ರಹಿಸಿ, ಎರಡನ್ನೂ ಪರಿಶೀಲಿಸಬೇಕು. ಇವೆರಡರಲ್ಲಿ ಬೇಕು ಅಥವಾ ಬೇಡ ಅನ್ನುವವರ ಬಗ್ಗೆ ಸ್ಪಷ್ಟ ಅಂಕಿ ಸಂಖ್ಯೆ ಸಮೇತ ಮಾಹಿತಿ ಲಭ್ಯವಾಗಲಿದೆ. ಒಂದು ಮತ ಟೌನ್‌ಶಿಪ್ ಪರ-ವಿರೋಧ ಬಂದರೂ ತೀರ್ಮಾನಕ್ಕೆ ಬದ್ಧರಾಗಿರಬೇಕು. ಇದು ಬಿಟ್ಟರೆ ಯಾರು ಟೌನ್‌ಶಿಪ್ ಪರ ಇದ್ದಾರೆ ಅಥವಾ ವಿರುದ್ಧ ಇದ್ದಾರೆ ಎನ್ನುವುದು ಗೊತ್ತಾಗಲ್ಲ. ಗೊಂದಲಕ್ಕೆ ಕಾರಣವಾಗುತ್ತದೆ ಅಲ್ಲದೇ ಶೀಘ್ರ ಈ ಸಮಸ್ಯೆಗೆ ಮುಕ್ತಿ ಪರಿಹಾರ ಸಿಗಲು ಕಷ್ಟವಾಗುತ್ತದೆ. ಬೆಂಗಳೂರು ದಿನದಿಂದ ದಿನಕ್ಕೆ ವ್ಯಾಪ್ತಿ ಹಬ್ಬುತ್ತಿದ್ದು, ಮುನ್ನೆಚ್ಚರಿಕೆಯ ಕ್ರಮವಾಗಿ ಈ ಸರ್ಕಾರ ಅಲ್ಲ. ಹಿಂದಿನ ಸರ್ಕಾರ ಟೌನ್‌ಶಿಪ್ ಬಗ್ಗೆ ಕ್ರಮ ಕೈಗೊಂಡಿದೆ ಎಂದು ಹೇಳಲಾಗುತ್ತಿದೆ.
ಬೆಂಗಳೂರಿಗರಿಗೆ ಟೌನ್‌ಶಿಪ್ ಅಗತ್ಯ ಇದೆಯೇ ಇಲ್ಲವೋ ಗೊತ್ತಿಲ್ಲ. ಆದರೆ ರೈತರ ಸಹಮತ ಬೇಕು, ಹಾಗಾಗಿ ಅವರ ಭಾವನೆಗಳಿಗೂ ಸರ್ಕಾರ ಸ್ಪಂದಿಸಬೇಕು. ಕೆಲ ರೈತರು ಭೂಮಿ ಕೊಡಲು ಸಿದ್ಧರಿದ್ದಾರೆ, ಕೆಲವರು ಸಿದ್ಧರಿಲ್ಲ. ಹೀಗಾಗಿರುವ ಒಂದು ರೀತಿಯಲ್ಲಿ ಗೊಂದಲದ ಗೂಡಾಗಿದೆ. ಚುನಾವಣೆ ಮುಖಾಂತರ ಅಥವಾ ಬೇಕಾ ಅಥವಾ ಬೇಡ್ವಾ ಎಂಬ ಸಹಿ ಸಂಗ್ರಹ ಮುಖಾಂತರವಾದರೂ ಅಂಕಿ ಸಂಖ್ಯೆ ತೆಗೆದುಕೊಂಡು ತೀರ್ಮಾನ ತೆಗೆದುಕೊಳ್ಳುವುದು ಸೂಕ್ತ. ಚುನಾವಣೆ ಅಥವಾ ಸಹಿ ಸಂಗ್ರಹ ಇವೆರಡೂ ಬೇಡದಿದ್ದರೆ ಸರ್ಕಾರದಿಂದ ನುರಿತ ತಜ್ಞರನ್ನು ನೇಮಿಸಿ, ಪಹಣಿಯಲ್ಲಿರುವ ರೈತರ ಮನೆ ಮನೆಗೆ ತೆರಳಿ ಅವರ ಅಭಿಪ್ರಾಯ ಆಲಿಸಬೇಕು. ಆ ವರದಿ ಮೇಲೆಯಾದರೂ ಸೂಕ್ತ ನಿರ್ಧಾರ ಕೈಗೊಳ್ಳಬೇಕು.
ಇಲ್ಲದಿದ್ದರೆ 6 ತಿಂಗಳು ಅಲ್ಲ, 6 ವರ್ಷವಾದರೂ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗುವುದಿಲ್ಲ. ನಿರಂತರವಾಗಿ ದಿನ ದೂಡುತ್ತದೆ, ಹಾಗಾಗಿ ಸರ್ಕಾರ ಗೊಂದಲಕ್ಕೆ ತೆರೆ ಎಳೆಯುವ ಕೆಲಸ ಮಾಡಬೇಕು. ಇಲ್ಲವೇ ಬಿಡದಿ ಹೊರತುಪಡಿಸಿ, ಬೆಂಗಳೂರಿನ ಅಕ್ಕಪಕ್ಕದ ತಂಟೆ ತಕರಾರು ಇಲ್ಲದ ಮತ್ತೊಂದು ಜಾಗ ಪರಿಶೀಲಿಸಿ ಕ್ರಮ ಕೈಗೊಳ್ಳಬೇಕಿದೆ.
ವೀರೇಶ ಧೂಪದಮಠ